ಬಂಗಾರಪೇಟೆ : ವೈದ್ಯಕೀಯ ವೃತ್ತಿ ಸೇವಾ ಮನೋಭಾವದ ಪ್ರವೃತ್ತಿಯಾಗಬೇಕೆ ಹೊರತು ಹಣಗಳಿಕೆಯ ಅಸ್ತ್ರವಾಗಬಾರದು, ಇತ್ತೀಚಿನ ದಿನಗಳಲ್ಲಿ ವೈದ್ಯರು ತಮ್ಮ ಜವಾಬ್ದಾರಿಯನ್ನು ಮರೆತು ಹಣ ಸಂಪಾದನೆಯ ವೃತ್ತಿಯಲ್ಲಿ ನಿರತರಾಗಿದ್ದಾರೆ, ಅಂತವರ ಮದ್ಯೆ ಜನಸೇವೆ ಮಾಡುವ ಸದುದ್ದೇಶ ಹೊಂದಿರುವ ವೈದ್ಯರಾದ ಬಿ.ಆರ್.ಸುರೇಶ್ ಬಾಬುರವರ ಸೇವೆ ಶ್ಲಾಘನೀಯ ಎಂದು ದೋಣಿಮಡುಗು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಾ ಮಹದೇವ್ ಅವರು ಅಭಿಪ್ರಾಯಪಟ್ಟರು.

ಕಾಮಸಮುದ್ರ ಹೋಬಳಿಯ ದೋಣಿ ಮಡುಗು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿ. ಆರ್.ಡಿ. ವೈದ್ಯಕೀಯ ಸಂಸ್ಥೆಯ ಸಹಯೋಗ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳ ಮಹದೇವ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೀವ ದೈವತ್ವದ ಸಂಕಲ್ಪವಾದರೆ ಜೀವ ಉಳಿಸುವವರು ವೈದ್ಯರು, ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಿ ಸದೃಢ ಮಾನವ ಸಂಪನ್ಮೂಲವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ಕೀರ್ತಿ ವೈದ್ಯರಿಗೆ ಸಲ್ಲುತ್ತದೆ, ಕರೋನ ದಂತಹ ಮಹಾಮಾರಿಯ ಸಮಯದಲ್ಲಿ ವೈದ್ಯರು ತಮ್ಮ ಜೀವನವನ್ನು ಮುಡಿಪಾಗಿಟ್ಟು ಹಗಲು ರಾತ್ರಿ ಎನ್ನದೆ ಸಾರ್ವಜನಿಕರ ಸೇವೆ ಮಾಡಿರುವುದು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂದು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿ.ಆರ್.ಡಿ. ಸಂಸ್ಥೆಯ ವೈದ್ಯರಾದ ಸುರೇಶ್ ಬಾಬುರವರು ಉಚಿತ ತಪಾಸಣಾ ಶಿಬಿರ ನಡೆಸುತ್ತಿರುವುದು ಹೆಮ್ಮೆಯ ವಿಚಾರ, ಈ ಶಿಬಿರದಲ್ಲಿ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರಿಗೆ ಉಚಿತ ತಪಾಸಣೆ ಮತ್ತು ಔಷಧಿಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.

ವೈದ್ಯ ನಾರಾಯಣೋಭವ:
ನಂತರ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಪ್ಪ ಮಾತನಾಡಿ, ವೈದ್ಯಕೀಯ ಸೇವೆ ರಾಜ್ಯ, ರಾಷ್ಟ್ರ, ವಿದೇಶದ ಗಡಿಯನ್ನು ಮೀರಿ ಭ್ರಾತೃತ್ವದ ಸಹಕಾರದೊಂದಿಗೆ ಜನಸೇವಾ ಪ್ರಕ್ರಿಯೆಯ ಅಧಿಷ್ಠಾನವಾಗಿದೆ.
ಡಾಕ್ಟರ್ ಸುರೇಶ್ ಬಾಬುರವರು ಮೂಲತಹ ಆಂಧ್ರಪ್ರದೇಶದವರು ಇವರ ತಂದೆ ದೊರೆಸ್ವಾಮಿ ನಾಯ್ಡು ಸಮಾಜಸೇವಕರಾಗಿದ್ದರು, ತಂದೆಯ ಆಶಯದಂತೆ ಜನಸೇವೆ ಮಾಡುವ ಪ್ರವೃತ್ತಿಯನ್ನು ಕರಗತ ಮಾಡಿಕೊಂಡ ಇವರು ಆಂಧ್ರಪ್ರದೇಶದ ಬಹುಪಾಲು ಗ್ರಾಮಗಳಲ್ಲಿ ಉಚಿತ ವೈದ್ಯಕೀಯ ತಪಾಸಣೆ ನೀಡಿ ಲಕ್ಷಾಂತರ ರೋಗಿಗಳಿಗೆ ಆಸರೆಯಾಗಿದ್ದಾರೆ.

ಹಣ ಸಂಪಾದನೆಯಿಂದ ಒಬ್ಬ ವ್ಯಕ್ತಿ ಆರ್ಥಿಕವಾಗಿ ಸಬಲನಾಗುತ್ತಾನೆ ಹೊರತು ಉತ್ತಮ ಸತ್ಚಾರಿತ್ರ್ಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಿಲ್ಲ, ಯಾವ ವ್ಯಕ್ತಿಯಲ್ಲಿ ಸೇವಾ ಮನೋಭಾವ ಇರುತ್ತದೆಯೋ ಅವರು ಜೀವನದ ಯಶಸ್ಸಿನ ಘಟ್ಟವನ್ನು ತಲುಪುತ್ತಾರೆ, ದೋಣಿಮಡುಗು ಗ್ರಾಮ ಪಂಚಾಯಿತಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಕಾರಣ ಇಂದು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದಾರೆ, ಮತ್ತು ಸಾವಿರಾರು ಗ್ರಾಮಸ್ಥರು ಈ ಶಿಬಿರದಲ್ಲಿ ಭಾಗವಹಿಸಿ ಉಚಿತ ಔಷಧಿಗಳನ್ನು ಪಡೆದುಕೊಳ್ಳುತ್ತಿದ್ದಾರೆ, ಒಂದು ದೇಶದ ಭವಿಷ್ಯ ಅಲ್ಲಿನ ಶಿಕ್ಷಣ ಮತ್ತು ಆರೋಗ್ಯವನ್ನು ಅವಲಂಬಿಸಿದೆ, ಈ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ವೈದ್ಯರು ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಂ.ಪಂ. ಸದಸ್ಯರಾದ ಮುನಿಯಪ್ಪ. ಮಂಜುನಾಥ್. ಗೋಪಾಲಪ್ಪ. ನಾಗರತ್ನ. ಮುರುಗೇಶ್. ವೈದ್ಯರಾದ ಹರೀತಾ. ಬಿಂದು. ಹೇಮಂತ್. ಸತೀಶ್. ವಿನೀತ್. ಸಮಾಜಸೇವಕ ಹೋಸರಾಯಪ್ಪ. ಮತ್ತು ಪವಿತ್ರ ಮೆಡಿಕಲ್ಸ್. ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *