ಎ.ಪಿ.ಎಸ್ ಕಾಲೇಜಿನಲ್ಲಿ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ(SVEEP)ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ:

ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಪ್ರಮುಖ ಪಾತ್ರ ವಹಿಸಲಿದ್ದು, ಮತದಾನ ಮಾಡುವ ಹಕ್ಕು ಸಿಗುವ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಬೇಕೆಂದು ದಕ್ಷಿಣ ವಲಯ ಆಯುಕ್ತರಾದ ಜಯರಾಮ್ ರಾಯಪುರ ರವರು ವಿಧ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

ಮತದಾರರ ಸಾಕ್ಷರತಾ ಸಂಘವನ್ನು ಎನ್.ಆರ್ ಕಾಲೋನಿಯ ಆಚಾರ್ಯ ಪಾಠಶಾಲೆ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಉದ್ಘಾಟಿಸಿದ ಬಳಿಕ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ(SVEEP) ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಾವೆಲ್ಲರೂ ಸ್ವತಂತ್ರ್ಯ ಭಾರತದಲ್ಲಿ ಜನಿಸಿದ್ದು, ಒಳ್ಳೆಯ ಆಡಳಿತ ಹಾಗೂ ಸರ್ಕಾರ ಬೇಕೆಂದರೆ ಉತ್ತಮ ಜನಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡಬೇಕು. ಈ ಸಂಬಂಧ ಯುವ ಮತದಾರರಲ್ಲಿ ಆಲೋಚನೆ ಮಾಡುವ ಶಕ್ತಿಯಿದ್ದು, ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸಿ, ಒಳ್ಳೆಯ ಜನ ಪ್ರತಿನಿಧಿಯನ್ನು ಆಯ್ಕೆ ಮಾಡಿ ಉತ್ತಮ ಸಮಾಜವನ್ನು ರೂಪಿಸುವಲ್ಲಿ ಕೈಜೋಡಿಸಬೇಕೆಂದು ತಿಳಿಸಿದರು.

ಸ್ವೀಪ್ ಕಾರ್ಯದಡಿ ನಗರದಾದ್ಯಂತ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಬರಲಿದ್ದು, 17 ವರ್ಷ ದಿಂದ 18 ವರ್ಷ ತುಂಬುವ ಎಲ್ಲಾ ವಿದ್ಯಾರ್ಥಿಗಳು(ಯುವ ಮತದಾರರು) ಈಗಲೇ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. 18 ವರ್ಷ ತುಂಬಿದ ಪ್ರತಿಯೊಬ್ಬ ಯುವ ಮತದಾರರಿಗೂ ಯಾವುದೇ ಧರ್ಮ, ಜಾತಿ ಹಾಗೂ ವರ್ಗವನ್ನು ನೋಡದೆ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ಯಾರು ಬೇಕಾದರು ಸ್ಪರ್ಧೆ ಮಾಡಬಹುದಾಗಿದ್ದು, ಜನ ಮನ್ನಣೆ/ವಿಶ್ವಾಸವನ್ನು ಪಡೆಯುವವರು ಚುನಾಯಿತ ಪ್ರತಿನಿಧಿಗಳಾಗಲು ಸಾಧ್ಯವಿದೆ. ಚುನಾವಣೆಯಲ್ಲಿ ಪಾಲ್ಗೊಂಡು ಹೆಚ್ಚು ಮತಗಳನ್ನು ಪಡೆಯುವವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಾರೆ. ಆಯ್ಕೆಯಾದ ನಂತರ ಜನ ನಿರೀಕ್ಷಿಸಿದ ಕೆಲಸ ಮಾಡದಿದ್ದರೆ 5 ವರ್ಷಗಳ ನಂತರ ಬದಲಾವಣೆ ಮಾಡುವ ಹಕ್ಕು ಪ್ರಜೆಗಳಲ್ಲಿರುತ್ತದೆ ಎಂದು ತಿಳಿಸಿದರು.

ಬೆಂಗಳೂರು ವ್ಯಾಪ್ತಿಯಲ್ಲಿ ಸದ್ಯ ಶೇ. 54 ರಷ್ಟು ಮಾತ್ರ ಮತದಾನವಾಗುತ್ತಿದೆ. ಅದನ್ನು ಕನಿಷ್ಠ ಶೇ. 70ಕ್ಕಾದರೂ ಹೆಚ್ಚಳ ಮಾಡಬೇಕಿದ್ದು, ಅದಕ್ಕೆ ಭಾರತ ಚುನಾವಣಾ ಆಯೋಗವು ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿ, ತಪ್ಪದೆ ಮತದಾನ ಚಲಾಯಿಸಲು ಮನವಿ ಮಾಡಿದರು.

ಸಭೆಯಲ್ಲಿ ಎನ್.ಎಸ್‌‌ಎಸ್ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ರಾಜ್ಯ ಶಾಸ್ತçದ ಪ್ರಾಧ್ಯಾಪಕರಾದ ಡಾ. ಕೆ. ವೀಣಾ, ಎ.ಪಿ.ಎಸ್ ಕಾಲೇಜು ಪ್ರಾಂಶುಪಾಲರಾದ ಎಸ್. ನಾಗರಾಜ್, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *